ಭಾವದಾsssಲಹರಿಗೆ... 3
ಒಡಲುರಿ
ಚಿಟಪಟ ಮಳೆಯಲಿ ತೋಯ್ದು ಹೋಗಿದ್ದಳು ಭಾಗೀರತಿ! ನೆತ್ತಿಯ ಮೇಲಣ ಸಣ್ಣ ಸಣ್ಣ ಕಪ್ಪು ಕೂದಲಿನ ಮೇಲೆ ಧೋ ಎಂದು ಸುರಿದ ಮಳೆ ! ಕಣ್ಣೀರನ್ನೂ ಕರಗಿಸಿಬಿಟ್ಟಿತ್ತು.
'...ಮುಂಡೇದೆ ನಿಂಗ್ಯಾಕ್ ಬಂತೇ ಈ ದುರ್ಬುದ್ದಿ , ತೊಲ್ಗು ..' ಅಂತ ಇವಳಕ್ಕ ಗೌರಮ್ಮ ಮನೆಯಿಂದ ಇವಳನ್ನು ಹೊರಗೆ ದಬ್ಬಿ ಬಡಿದ ಬಾಗಿಲಿನ ಡಬ್ ಎಂಬ ಸದ್ದು , ಬಾಗಿಲಿನ ಹಿಂದೆ ಅಕ್ಕ ಕುಳಿತು ರೋಧಿಸುತ್ತಿದ್ದ ಸದ್ದು ಇನ್ನೂ ಇವಳ ಕಿವಿಯಲ್ಲಿ ಗುಂಯ್ ಗುಡುತ್ತಿತ್ತು... ಮುರುಕಲು ಮನೆ ಮುಂದಣ ಛಾವಣಿಯಿಂದ ಮಳೆ ನೀರು ತೊಟ್ಟಿಕ್ಕುತ್ತಿತ್ತು!.
ಇವಳ ಇಡೀ ದೇಹವನ್ನು ಸುತ್ತಿದ್ದು 9 ಗಜದ ಒಂದು ಕೆಂಪು ಸೀರೆ ಮಾತ್ರ !
ಗೌರಮ್ಮ ಮನೆಯ ಹಿರಿಯ ಮಗಳು, ನಂತರ ಸಾಲಾಗಿ ಏಳು ತಮ್ಮಂದಿರು! ಅವರವರ ಪಾಡಿನ ಜಾಡು ಹಿಡಿದದ್ದಾಗಿದೆ. ಕೊನೆಯಲ್ಲಿ ಹುಟ್ಟಿದವಳೇ ಈ ಬೆಡಗು ಕಣ್ಣಿನ ಹುಡುಗಿ ಭಾಗೀರತಿ !
ಗೌರಮ್ಮನ ಅಪ್ಪ ಮಹಾನ್ ಮುಂಗೋಪಿ, ಬಂಡೆಯನ್ನೇ ಎತ್ತಬಲ್ಲ ಕಟ್ಟಾಳು ! ಬಡತನ, ದುಡಿಮೆಯಿಲ್ಲದ ಬದುಕು!, ಹಸಿವನ್ನು ನೀಗಿಸೋದಕ್ಕೆ 6 ವರ್ಷದ ಗೌರಮ್ಮನ್ನ 24 ವರ್ಷದ ಗಂಡಿಗೆ ವಧುದಕ್ಷಿಣೆ ಪಡೆದು ಮದುವೆ ಮಾಡಿದ! ಅಸಲಿಗೆ ಮಾರಿದ್ದು ಅಂತಲೇ ಅನ್ನಬಹುದು! ಆ ಗಂಡೋ ತನ್ನ 34 ನೇ ವಯಸ್ಸಿಗೆ ಕ್ಷಯರೋಗದಿಂದ ಗೊಟಕ್ ಎಂದುಬಿಟ್ಟ!
ಇತ್ತ ಭಾಗೀರತಿಯ ಕತೆಯೂ ಹೀಗೆಯೇ...!
54 ನೇ ವಯಸ್ಸಿನಲ್ಲಿದ್ದ ಒಬ್ಬ ವರನಿಗೆ 6ನೇ ವಧುವಾಗಿ 10 ವರ್ಷದ ಭಾಗೀರತಿಯನ್ನು ವಧುದಕ್ಷಿಣೆಗಾಗಿ ಕಟ್ಟಿಬಿಟ್ಟ! , ಈಕೆ 12ನೇ ವಯಸ್ಸಿಗೆ ಒಂದು ಹೆಣ್ಣು ಮಗಳನ್ನೂ ಹೆತ್ತಳು. ಮಗಳು ಜಾನಕಿಗೆ 13 ವರ್ಷ! ಮೈ ನೆರೆದು ಚಂದನದ ಗೊಂಬೆಯಂತಿದ್ದಾಳೆ! ಭಾಗಿರತಿಯೋ 25 ವರ್ಷದ ಸ್ಪುರದ್ರೂಪಿ ಯುವತಿ ಈಗ! ತನಗೆ ಮುದಿಗಂಡನೊಬ್ಬನಿದ್ದದ್ದು ,ಅವ ಸತ್ತದ್ದು.. ಮರೆತೇ ಹೋದಂತಿತ್ತು ಇವಳಿಗೆ. ಇಡೀ ದೇಹದ ತುಂಬೆಲ್ಲಾ 9 ಗಜದ ಕೆಂಪು ಸೀರೆಯೊಂದೇ! ಅದರಲ್ಲೇ ಮುಂಡಾಸು ! ಇಡೀ ದೇಹದಲ್ಲಿ ಒಂದೂ ಒಡವೆಯಿಲ್ಲ , ಹಣೆಯ ಮೇಲೆ ಬಾಲ್ಯದಲ್ಲಿ ಕೆತ್ತಿಸಿದ ಹಚ್ಚೆಯ ಗುರುತು, ಬಳೆಯ ಸದ್ದಿಲ್ಲದ ಮುಂಗೈ ಮೇಲೆ ಮೂರು ಹಚ್ಚೆ ಚುಕ್ಕೆ ಅಷ್ಟೇ ! ಒನಪು , ಲಾವಣ್ಯಕ್ಕೇನೂ ಕೊರತೆಯಿಲ್ಲದಂತಿದ್ಲು.
ಮೈನೆರೆದ ಜಾನಕಿಗೆ ನೆರೆ, ಹೊರೆ, ಹಿರಿಯರಿಂದ ದೂರದ ಸಂಬಂಧಿ ಜಯಂತನೊಡನೆ ಮದ್ವೆ ನಿಶ್ಚಯವಾಯ್ತು.
ಜಯಂತನಿಗೆ ಜಾನಕಿ ಒಪ್ಪಿಗೆ ಅನ್ನಿಸಿದ್ದು ಮೈಕೈ ತುಂಬಿಕೊಂಡಿದ್ದ ಸ್ಪುರದ್ರೂಪಿ, ನಿರಾಭರಣಿ ಭಾಗೀರತಿಯನ್ನು ನೋಡಿಯೇ!
ಅಕ್ಕ ಗೌರಮ್ಮ ಹೊಟ್ಟೆಹೊರೆಯಲೆಂದು ನಾಲ್ಕೈದು ಮನೆಗೆ ಮೆಣಸಿನ ಹುಡಿ ಕುಟ್ಟುವ ವರ್ತನೆ ಮಾಡಿಕೊಂಡಿದ್ಲು. ಅವಳಿಲ್ಲದ ಸಮಯದಲ್ಲಿ ಜಯಂತನ ಆಗಮನ ಹೆಚ್ಚಾಯ್ತು, ಜಾನಕಿಯನ್ನೂ ಶಾಲೆಗೆ ಹೋಗಿ ಬರಲೆಂದು ಉದಾರ ಮನಸ್ಸಿನಿಂದ ಕಳುಹಿಸುತ್ತಿದ್ದ ಜಯಂತ !.
ಭಾಗೀರತಿ-ಜಯಂತನ ಕಣ್ಣುಗಳು ಕಲೆಯುತ್ತಿದ್ದುದು ಹರೆಯದ ಕಾವನ್ನು ಹೆಚ್ಚಿಸುತ್ತಿತ್ತು! ಮೈಮರೆತ ಕ್ಷಣವೆಲ್ಲಾ ಕ್ಷಣಿಕವೇ ಆಗಿದ್ದು ಭಾಗೀರತಿಗೆ ಬಲವಂತದ ವಾಂತಿ ಶುರುವಾದಾಗ ! ಗಂಡನಿಲ್ಲದ ಭಾಗೀರತಿ ಈಗ ಬಸುರಿ!
ತಂಗಿಯನ್ನು ಮಗಳಿನಂತೆಯೇ ಸಾಕಿದ್ದ ಗೌರಮ್ಮ... ಸಿಟ್ಟಿನಿಂದ ಅವಳನ್ನು ಹೊರದಬ್ಬಿ, ಚಿಲಕವನ್ನು ಪೇರಿಸಿ, ಗೋಡೆಗೆ ಹಣೆ ಚಚ್ಚಿಕೊಳ್ಳುತ್ತಾSSS, ಛೀರಿಕೊಂಡು, ಗೋಳಾಡಿ ಮೆತ್ತಗಾದಳು !
ಮಳೆಯಲ್ಲಿ ನೆಂದು ಮುದ್ದೆಯಾಗಿದ್ದ ಭಾಗೀರತಿಯ ಪಕ್ಕ ಕುಳಿತು...ಒಡಲುರಿಯ ಬಚ್ಚಿಟ್ಟು, ಅತ್ತು ಹಗುರಾಗಿ , ಒಳಗೆ ಕರೆದೊಯ್ದು, ತಲೆಗೆ ನೀರು ಹುಯ್ದು , ಸಮಾಜಕ್ಕೆ ಅಂಜಿ, ಬಸಿರು ಬರಿದು ಮಾಡಲು ಹಸಿರೌಷಧ ಉಣಿಸಿ , ಸಾಂಬ್ರಾಣಿಯ ಕಾವು ಕೊಟ್ಟು, ಬೆಚ್ಚಗೆ ಹೊದಿಸಿ, ತಲೆಯನ್ನೊಮ್ಮೆ ಕೈಯಿಂದ ಸವರಿಸಿ, ಹಣೆಗೆ ಮುತ್ತಿಟ್ಟು ಮಲಗಿಸಿದ ಅವ್ವಳಂತಹ ಅಕ್ಕಈ ಗೌರಮ್ಮ!.
- ಕೌಸ್ತುಭಾ ಭಾರತೀಪುರಂ

Wowww !!!
ReplyDeleteSimply superb
ReplyDelete