ಭಾವದಾsssಲಹರಿಗೆ...-4 ಬದುಕೆಷ್ಟು ಹತ್ತಿರ !!!! ಲಲಿತೆಗಿನ್ನೂ 4 ವರ್ಷ. ಮುದ್ದಾದ ಹಾಲು ಬಿಳುಪಿನ ಗುಂಡು ಮುಖ, ದಟ್ಟವಾದ ಕಪ್ಪು ಕೂದಲು, ಎರಡು ಉದ್ದನೆಯ ಜಡೆಯನ್ನು ಮೇಲಕ್ಕೆ ಕಟ್ಟಿ ,ದುಂಡಾದ ಕಾಕಡ, ಕನಕಾಂಬರವನ್ನು ಮುಡಿಸಿ, ಕಣ್ಣಿಗೆ ಕಾಡಿಗೆ ಇಟ್ಟು , ಬಲಗೆನ್ನೆಯ ಮೇಲೊಂದು ಚುಕ್ಕೆ ಇಟ್ಟು , ತನ್ನ ಸೀರೆಯಿಂದಲೇ ಹೊಲಿದ, ಉದ್ದನೆಯ ರೇಷ್ಮೆ ಲಂಗ, ರವಿಕೆ...ಕೈ ತುಂಬಾ ಝಲ್ ಝಲ್ ಅನ್ನುವ ಬಳೆ ತೊಡಿಸಿ ಆಟ ಆಡ್ಕೋ ಹೋಗು ಎಂದು ಮುತ್ತಿಡುತ್ತಿದ್ದಳು ಲಲಿತೆಯ ಅಮ್ಮಾ !! ಥೇಟ್ ಗೊಂಬೆಯಂತೆಯೇ ಕಾಣುತ್ತಿದ್ದ ಲಲಿತಾಗೆ ನೃತ್ಯ ಮಾಡುವುದೆಂದರೆ ಪಂಚಪ್ರಾಣ, ಅವಳ ಪ್ರತೀ ಮಾತು , ಭಂಗಿ, ಭಾವವನ್ನೆಲ್ಲಾ ನೆಂಟರಿಷ್ಟರು, ಸ್ನೇಹಿತರಷ್ಟೇ ಅಲ್ಲ ದಾರಿಹೋಕರೂ, ದೇವಾಲಯದ ಭಕ್ತರ ಮಹಾಪೂರ ಕಣ್ತುಂಬಾ ಸೆರೆಹಿಡಿದುಕೊಂಡು ಕೊಂಡಾಡುತ್ತಿದ್ದರು ! ಮನೆಯ ಪಕ್ಕದಲ್ಲೇ ಹೊಯ್ಸಳರ ಶೈಲಿಯ ಬೃಹತ್ ಗುಡಿಯ ಮುಂದೆ ತೋಚಿದ್ದನ್ನೆಲ್ಲಾ ನರ್ತಿಸುತ್ತಿದ್ದಳು ಲಲಿತೆ ! ಅಪ್ಪ ರಾಮದಾಸ ಅದೇ ದೇಗುಲದ ಅರ್ಚಕ, ನೃತ್ಯದಲ್ಲೇ ತಲ್ಲೀನಳಾಗಿ ದಣಿದು ಬಂದ ಕೂಸನ್ನು ಪ್ರಸಾದ ತಿನ್ನಿಸಿಕೊಂಡು ,ಹೆಗಲಮೇಲೆ ಕೂರಿಸಿಕೊಂಡು, ನವಿಲನ್ನೇ ಹೊತ್ತು ಮೆರೆಯುತ್ತಿರುವ ಭಾವದಿಂದ ನಲಿದಾಡುತ್ತಾ ಹಿಗ್ಗಿನಿಂದ ಮನೆ ತಲುಪುತ್ತಿದ್ದ ! ಅವನ ಬದುಕಿನಲ್ಲಿ ಲಲಿತೆಯ ಹೊರತು ಬೇರೇನೂ ಮಹತ್ತಿರಲಿಲ್ಲ !. ಲಲಿತೆಗೀಗ 6 ವರ್ಷ, ಬದುಕೆಷ್ಟು ದೂರ ಎಂದುಕೊಳ್ಳುತ್ತಿದ್ದ! ..ಕಾಲ ಉರು...