ಭಾವದಾSSSಲಹರಿಗೆ..... -1

ಗುಲ್ಮೊಹರ
ಸೂರ್ಯ ಮುಳುಗೋ ಹೊತ್ತು.ಇಪ್ಪತ್ತೆರೆಡರ ವಯಸ್ಸು!  ದಾರಿಯಲ್ಲಿ ಬಿದ್ದ ಕೇಸರಿ ಗುಲ್ಮೊಹರದ ಹೂವುಗಳನ್ನ ಆರಿಸಿ ತಂದು ಮನೆಯ ಕಿಟಕಿಯ ಪಕ್ಕ ಇಡ್ತಿದ್ದ.ಎದುರು ಮನೆಗೆ ಬಂದಿರೋ ಉದ್ದ ಜಡೆಯ ಹುಡುಗಿ ,ಕಾದು ಯಾವುದೋ ಮಾಯದಲ್ಲಿ ಮೆಲ್ಲಗೆ ಕಾಲು ಗೆಜ್ಜೆಯನ್ನಷ್ಟೇ ಜ಼ಲ್ ಜ಼ಲ್ ಸದ್ದು ಮಾಡಿ ತೊಗೊಂಡು ಹೋಗ್ತಿದ್ಲು...
ಆಹಾ!! ಗುಲ್ಮೊಹರ ಅಲ್ಲಿ ಇಲ್ಲದ್ದನ್ನ ನೋಡಿದ ತಕ್ಷಣ ಇವನ ಹೂವಿನಂತ ಮನಸ್ಸು ಹಗುರಾಗಿ ತೇಲಿದಂತಾಗ್ತಿತ್ತು. 


'ಯಾಕೋ ಪೆದ್ದ್ ಪೆದ್ದಾಗಿ ನಗ್ತೀಯಾ, ಏನೋ ಆಗಿದೆ ಇವ್ನಿಗೆ...ಮೇಲ್ ಹೋಗಿ ಬಟ್ಟೆ ತೊಗೊಂಡ್ ಬಾ ಅನ್ನೋವ್ಳು ಅಮ್ಮಾ! 
ಇವ ಸಿಕ್ಕಿದ್ದೇ ಚಾನ್ಸ್ ಅಂತ ಓಡಿ ಹೋಗ್ತಿದ್ದ. ಅವಳು ಮನೆಯ ವರಾಂಡದಲ್ಲಿ ಬೆಕ್ಕು, ನಾಯಿಯ ಜೊತೆ ಆಡಿಕೊಂಡು ಕಿರುಗಣ್ಣಿಂದ ಇವನನ್ನ ಗಮನಿಸ್ತಿದ್ಲು.. ಹಾಗೇ ಆಕೆ ನೋಡಿದಾಕ್ಷಣ ಹೃದಯದ ಬಡಿತ ಹೆಚ್ಚಾಗಿಬಿಡ್ತಿತ್ತು... 
'ದೀಪ ಹಚ್ಚಿದ್ದಾದ್ಮೇಲೂ ಹೊರಗ್  ಏನ್ ಮಾಡ್ತಿದ್ದೀಯಾ..ಒಳಗ್ ಬಾ' ಅನ್ನೋ ಸದ್ದು ಕೇಳಿ ಒಳಗೆ ಅವಿತರೆ ನಾಳೆ ಸಂಜೆಯವರೆಗೂ ಅವಳ ದರ್ಶನವಿರುತ್ತಿರಲಿಲ್ಲ.
ಸೂರ್ಯ ಮುಳುಗೋ ಹೊತ್ತು, ದಾರಿಯಲ್ಲಿ ಗುಲ್ ಮೊಹರವಿತ್ತು. ನೋಡುತ್ತಲೇ ನಿಂತ! ಅವಳ ಮನೆ ಬಾಗಿಲು ಮುಚ್ಚಿತ್ತು! ತುಂತುರು ಮಳೆ ಹನಿಯಲ್ಲಿ ಹಿತವಿರಲಿಲ್ಲ..
ಅದೊಂದು ಕೆಟ್ಟ ದಿನ ! ಕಿಟಕಿಯ ಪಕ್ಕ ಇಟ್ಟಿದ್ದ ಗುಲ್ಮೊಹರವನ್ನ ತೆಗೆದುಕೊಂಡು ಹೋಗುವಾಗ ಜ಼ಲ್ ಜ಼ಲ್ ಗೆಜ್ಜೆ, ಮಿಯಾಂವ್ ಅನ್ನೋ ಬೆಕ್ಕಿನ ಸದ್ದು ಕೇಳಿದ್ದು ಅದೊಂದೇ ಕ್ಷಣ... ಜೋರಾಗಿ ಚೀರಿದ್ಲು ... ಇವನು ಕೇಳಿದ ಮೊದಲ ಹಾಗು ಕೊನೆಯ ದನಿ ಅದೇ ಆಗಿತ್ತು. ಅಷ್ಟೇ, ಲಾರಿಯೊಂದು ಅವಳನ್ನು ಅಪ್ಪಳಿಸಿ ಆಹುತಿ ತೆಗೆದುಕೊಂಡು ಬಿಟ್ಟಿತ್ತು... ಗುಲ್ಮೊಹರ ರಕ್ತದ ಮಡುವಿನಲ್ಲಿ  ಒದ್ದೆಯಾಗಿತ್ತು..ಇವನೋ ಕಣ್ಣೀರಿನಲ್ಲಿ!.

ಸೂರ್ಯ ಮುಳುಗೋ ಹೊತ್ತು! ವಯಸ್ಸು ಮೂವತ್ತೆರಡಾಯ್ತು. ದಾರಿಯಲ್ಲಿ ಬಿದ್ದಿರೋ ಗುಲ್ಮೊಹರ,ತಂಗಾಳಿಯಲ್ಲಿ  ಹಿತವಿರಲಿಲ್ಲ... 
ಕಿಟಕಿಯ ಸರಳುಗಳು ಚಿರವಿರಹದ ದನಿಯಾಗಿತ್ತು.

-ಕೌಸ್ತುಭಾ ಭಾರತೀಪುರಂ.

Comments

  1. Good one 👍 Keep writing 🙏

    ReplyDelete
  2. ಕತೆ ಚೆನ್ನಾಗಿದೆ, ಆದರೆ sad ending ನಂಗೆ ಇಷ್ಟವಿಲ್ಲ

    ReplyDelete
  3. Beautiful,
    ಭಾವದ ಲಹರಿಗೆ ಬಯಲು ದಾರಿಯ ತೋರೆ!

    ReplyDelete

Post a Comment

Popular posts from this blog