ಭಾವದಾsssಲಹರಿಗೆ...-2
ಲೋಪ ಸಾಗರ
ಅವಳೋ...ಅವಳೇ ಒಂದು ಚಿಲಿಪಿಲಿ ಹಾಡು ಹಕ್ಕಿ.. 'ಲೋಪ ಮುದ್ರಾ', ಸಾಗರನ ಸೋದರತ್ತೆ ಮಗಳು. ಇವನೆಷ್ಟು ಮೌನಿಯೋ ಅವಳಷ್ಟೇ ಧೋ ಎಂದು ಸುರಿವ ಚಿಟಪಟ ಮಳೆ. ಅವಳ ಮನೆ ಇವನ ಮನೆಯ ಒಂದೆರೆಡು ಬೀದಿ ಆಚೆ ಈಚೆ.
ಚೆಂದದ ಲಂಗದಾವಣಿ, ಕಿವಿಯಲ್ಲಿ ಜುಮುಕಿ, ಕೈತುಂಬಾ ಬಳೆ, ದಟ್ಟವಾದ ಉದ್ದ ಜಡೆ, ಜಡೆಯಲ್ಲಿ ಮಲ್ಲಿಗೆ ಮೊಗ್ಗು, ಕಾಲಲ್ಲಿ ಜಲ್ ಜಲ್ ಅನ್ನೋ ಗೆಜ್ಜೆ... ಇವಳು ಸಾಗರನಿಗಷ್ಟೇ ಪ್ರಪಂಚವಲ್ಲಾ... ಅವನು ಅವರ ತೊಟ್ಟೀಮನೆ ಸುತ್ತ ನೇತು ಹಾಕಿದ್ದ ಪಂಜರಗಳಲ್ಲಿನ ಹಕ್ಕಿಗಳೂ ಇವಳ ಗೆಜ್ಜೆ ಸದ್ದಿಗೆ ಚೀಂವ್ ಚೀಂವ್ ಅಂತ ನಲಿದು ಹಾಡುತ್ತಿದ್ದವು.
ನಾಳೆ ಎಕ್ಸಾಮ್ ಕಣೇ... ಒಂದೆರೆಡ್ ದಿನ ನೀನು ಈ ಕಡೆ ಬಂದು ಡಿಸ್ಟರ್ಬ್ ಮಾಡ್ಬೇಡ..ನೀನೂ ಓದ್ಕೋ ಇಲ್ಲದಿದ್ರೆ ಮೆಡಿಕಲ್ ಸೀಟ್ ಸಿಗಲ್ಲ ಅಂತ ಹೇಳಿ ಫೋನ್ ಇಡೋಷ್ಟ್ರಲ್ಲಿ ಅವಳು ಸುಯ್ಯ್...ಅಂತ ಸುಳಿದು ಹಿಂದಿನಿಂದ ಅವನನನ್ನೊಮ್ಮೆ ಬಳಸಿ ,ಕಿವಿಯಲ್ಲಿ ಕೂಂ...ಅಂತ ಕಿರುಚಿ ತಲೆಯನ್ನೊಮ್ಮೆ ಕೆದರಿ ಪುಟ ಪುಟ ಅಂತ ಅಡುಗೆ ಮನೆಗೆ ಓಡಿಬಿಡ್ತಿದ್ಲು.
ಲೋಪಳೂ ಎಂದೆಂದೂ ಶಾಲೆಗೆ ಟಾಪರ್ ಆಗಿಯೇ ಉಳಿವ, ಲವಲೇಶವೂ ಲೋಪವಿರದ ಹುಡುಗಿ. ಕೊಳಲನೂದುತ ತೊಟ್ಟಿಮನೆ ಮಧ್ಯೆ ಇದ್ದ ತುಳಸೀ ಕಟ್ಟೆಯ ಮುಂದೆ ಕೂತು ಬಿಟ್ರೆ ಮಳೆ ಬಂದು ನಿಂತ ಅರಿವೇ ಇರ್ತಿರ್ಲಿಲ್ಲ... ಸಾಗರನೂ ಹಾಡುತ್ತಾ..ಅವಳೆದುರು ಕಳೆದುಹೋಗ್ತಿದ್ದ..
ಇದ್ದಕ್ಕಿದ್ದ ಹಾಗೇ ಲೋಪಳ ಬದುಕಿಗೆ ಅವರಪ್ಪನ ಸಾವು ಬಿರುಗಾಳಿಯಂತೆ ಅಪ್ಪಳಿಸಿಬಿಡ್ತು. ಮನೆಯ ಹಿರಿಯರೆಲ್ಲಾ ಸಾಗರನ ಮನೆಯಲ್ಲೇ ಕೂತು ಈ ವರ್ಷವೇ ಮದುವೆ ಮಾಡಿಬಿಡೋದಂತ ನಿಶ್ಚಯಿಸಿ ಬಿಟ್ರು. ಸಾಗರನಿಗೆ ಉಸಿರೇ ನಿಂತಂತಾಯ್ತು... ಇವನೇ ಕಡೆಯವನು ..ಇನ್ನೂ ಓದುತ್ತಿದ್ದಾನೆ ಬೇರೆ ..ಅವನ ಬಾಯಿ ಕಟ್ಟಿತ್ತು. ಲೋಪ -ಸಾಗರರ ಕಣ್ಣಾಲಿಗಳು ಇವತ್ತು ಕೇವಲ ಒಂದಾಗಿದ್ದು ಮಾತ್ರವಲ್ಲ..ಕಣ್ಣೀರ ಕಟ್ಟೆ ಒಡೆಯಿತು.
ಏ ಲೋಪ ಏನೇ ಮಾಡ್ತಿದ್ದೀಯಾ...ಅಂತ ಕಿವಿ ಹಿಂಡಿಸಿಕೊಳ್ಳುತ್ತಿದ್ದ ಗೆಳತಿ ತನ್ನ ಬದುಕಿನಿಂದ ಲೋಪವೇ ಆಗಿಬಿಡುತ್ತಾಳೇನೋ ಅನ್ನೋ ನೋವಿನಲ್ಲೇ ದಿನಗಳು ಉರುಳಿ ಮದುವೆಯ ಹಿಂದಿನ ದಿನ ಬಂದೇ ಬಿಟ್ಟಿತು.
ಲೋಪ ಗಿಣಿಹಸಿರು ಲಂಗದಾವಣಿ ತೊಟ್ಟು...ಕೈಲಿ ಎರಡು ಗಿಣಿಗಳಿರುವ ಪಂಜರವನ್ನು ಹಿಡಿದು ಬಂದು ಸಾಗರನ ಮುಂದೆ ನಿಂತು ಅಳುತ್ತಾ ಕುಸಿದುಬಿಟ್ಳು.. ಅತ್ತು ಹಗುರಾಗಿಬಿಡ್ಲಿ ಅಂತ ಸಾಗರನೂ ತುಸುವೇ ದೂರ ನಿಂತ. ಕಣ್ಣೀರ ಮಳೆಹನಿ ಕಡಿಮೆಯಾದ ಮೇಲೆ ಅವಳ ಕೈಗೊಂದು ಕೊಳಲನ್ನಿಟ್ಟು...ಹಣೆಗೆ ಮುತ್ತಿಟ್ಟ. ಅವಳನ್ನ ಮನೆಗೆ ಬಿಡಲು ಹೊರಟಾಗ ಗಿಣಿ ಮರಿಗಳು 'ಓಪ ಓಪ' ಅಂತ ಕರೆಯುತ್ತಾ ಇದ್ದುದ್ದು ಇಂದಿಗೂ ಅವನ ಕಿವಿಯಲ್ಲಿ ರಿಂಗಣಿಸುತ್ತಲೇ ಇದೆ.
ಲೋಪಳ ನೆನಪಿನ ಸಾಗರದಲ್ಲಿಯೇ ಮುಳುಗಿದವ ಇವ... ಲೋಪಸಾಗರ...
- ಕೌಸ್ತುಭಾ ಭಾರತಿಪುರಂ

Super
ReplyDelete👌
ReplyDeleteಆಹಾ!! ಆಹಾ.. ಸಕ್ಕತ್ !!!
ReplyDeleteNice Narration 👌
ReplyDelete